ವಿಕ್ಲಿಫ್, ಜಾನ್
	1330-84. ಇಂಗ್ಲೆಂಡಿನ ಗದ್ಯ ಬರೆಹಗಾರ. ಉತ್ತರ ಯಾರ್ಕ್‍ಶೈರ್‍ನ ಸಮೀಪದ ರಿಚ್‍ಮಂಡ್‍ಗೆ ಹತ್ತಿರವಾದ ಗ್ರಾಮವೊಂದರಲ್ಲಿ 1330ರಲ್ಲಿ ಜನಿಸಿದ. 1354ರಲ್ಲಿ ಆಕ್ಸ್‍ಫರ್ಡ್‍ಗೆ ಬಂದ. ಮೆರ್ಟನ್, ಬ್ಯಾಲಿಯೋಲ್ ಮತ್ತು ಕ್ವೀನ್ಸ್ ಕಾಲೇಜುಗಳೊಡನೆ ಸಂಪರ್ಕ ಹೊಂದಿದ. ಆಕ್ಸ್ ಫರ್ಡಿನಲ್ಲಿ ಪ್ರಾಧ್ಯಾಪಕನಾ ಗಿದ್ದ. ಮೂರನೆಯ ಎಡ್ವರ್ಡ್‍ನ ಧಾರ್ಮಿಕಗುರು ವಾಗಿದ್ದ. ಚರ್ಚಿನ ಅಧಿಕಾರ ವರ್ಗೀಕರಣವನ್ನೂ ಪೋಪನ ಪರಮಾಧಿಕಾರವನ್ನೂ ವಿರೋಧಿಸಿದ. ಲ್ಯಾಟಿನ್ ಭಾಷೆಯಲ್ಲಿ ಗ್ರಂಥರಚನೆ ಯನ್ನು ನಿಲ್ಲಿಸಿ ಜನಸಾಮಾನ್ಯ ರಿಗೆ ತನ್ನ ನಿಲುವು ಅರ್ಥವಾ ಗಲೆಂದು ಇಂಗ್ಲಿಷನ್ನು ಬಳಸಿದ. ಇತರರ ನೆರವಿನಿಂದ ಬೈಬಲನ್ನು ಭಾಷಾಂತರಿಸಿದ. ಈ ಭಾಷಾಂತರದ ಎರಡು ಪಾಠಗಳಿವೆ. ಭಾಷಾಂತರದಲ್ಲಿ ಇವನ ಲೇಖನಿಯಿಂದ ಬಂದ ಭಾಗವೆಷ್ಟು ಎಂಬುದು ನಿಖರವಾಗಿಲ್ಲದಿದ್ದರೂ ಮೂಲ ಸ್ಫೂರ್ತಿ ಇವನದು ಎನ್ನುವುದು ನಿಸ್ಸಂಶಯ. ಇವನ ಗದ್ಯ ಉನ್ನತಮಟ್ಟಕ್ಕೇರದಿದ್ದರೂ ಮುಂದೆ 1611ರ ಬೈಬಲ್‍ನ ಭಾಷಾಂತರಕ್ಕೆ ಅಗತ್ಯವಾದ ಸಿದ್ಧತೆಯನ್ನು ಮಾಡಿಕೊಟ್ಟಿತು. ಜರ್ಮನಿಯ ಲ್ಯೂಥರನ ವಿಚಾರಧಾರೆಯ ಮುನ್ಸೂಚನೆಯನ್ನು ಇವನಲ್ಲಿ ಕಾಣಬಹುದಾಗಿದೆ. ಮೊದಲನೆಯ ಆಂಗ್ಲಭಾಷಾ ಕವಿಯೆಂದು ಖ್ಯಾತನಾಗಿರುವ ಛಾಸರ್‍ನ ಮೇಲೆ ಈತನ ಪ್ರಭಾವವಿರುವುದಾಗಿ ಹೇಳುತ್ತಾರೆ.  ಈತನ ಅನುಯಾಯಿಗಳು ಈತನಿಗೆ ಆರೋಪಿತವಾಗಿರುವ ಗ್ರಂಥಗಳನ್ನು ಬರೆದಿರಬಹುದೆಂದು ಆಧುನಿಕ ವಿದ್ವಾಂಸರಾದ ಆ್ಯನ್ ಹಡ್ಸನ್ ಮೊದಲಾದವರು ಅಭಿಪ್ರಾಯಪಡುತ್ತಾರೆ. 1380ರ ದಶಕದಿಂದಲೇ ಬೈಬಲ್‍ನ ಅನುವಾದದ ಆರಂಭದ ಆವೃತ್ತಿಗಳು ಲಭ್ಯವಿವೆ. ವಿಕ್ಲಿಫೈಟ್ ಉಪದೇಶ ಚಕ್ರವನ್ನು ಕುರಿತು ಇತ್ತೀಚೆಗೆ ಬಹಳ ಜಿಜ್ಞಾಸೆ ನಡೆದಿರುವುದಾದರೂ ವಿಕ್ಲಿಫೈಟ್ ಬರೆಹಗಳಲ್ಲಿ ಹೇಳಿಕೊಳ್ಳುವಂಥ ಸತ್ಯವಿಲ್ಲವೆಂದು ಆ್ಯನ್ ಹಡ್ಸನ್ ತಿಳಿಸಿದ್ದಾನೆ. ಈತ 1384ರಲ್ಲಿ ನಿಧನನಾದ.								
		(ಎಲ್.ಎಸ್.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ